ಕ್ರಿಸ್ತದನಿ

ಕ್ರಿಸ್ತನಂತಾಗಲು…

ಕ್ರಿಸ್ತನ ಸಜೀವ ಮಾತುಗಳು ನಮ್ಮ ಪ್ರಜ್ಞೆಯಾಗಬೇಕು. ಪ್ರಜ್ಞೆ ಎಂದರೆ ಅಭಿಜ್ಞಾನ ಅರಿವು, ಓದು, ಜ್ಞಾನ, ತಿಳಿವಳಿಕೆ, ತಿಳಿವು, ಬುದ್ಧಿ, ವಿಜ್ಞಾನ, ವಿದ್ಯೆ, ಸಂವೇದನೆ ಎಂಬ ನಾನಾ ಅರ್ಥಗಳಿವೆ. ಆದರೆ ಇಲ್ಲಿ ಪ್ರಜ್ಞೆಯಾಗುವುದೆಂದರೆ ಸಂಪೂರ್ಣವಾಗಿ ಕ್ರಿಸ್ತ ನಮ್ಮನ್ನು ಆವರಿಸಿಕೊಳ್ಳುವುದು ಎಂದರ್ಥ. ಕ್ರಿಸ್ತ ನಮ್ಮನ್ನು ಆವರಿಸಿಕೊಂಡಾಗ ನಮ್ಮ ಮಾತುಗಳು ಬರೀ ಮಾತುಗಳಾಗದೆ ಅರಿವಾಗಿ ಬದುಕಿನ ಕ್ರಿಯೆಗಳಾಗುತ್ತವೆ, ಕ್ರಿಯೆಗಳಾಗಿ ಕ್ರಿಸ್ತನನ್ನು ಬಿಂಬಿಸುತ್ತವೆ. ಕ್ರಿಸ್ತನ ಮಾತುಗಳು ನಮ್ಮ ಪ್ರಜ್ಞೆಯಾಗಬೇಕಾದರೆ, ದಿನನಿತ್ಯ ಅವನ ಮಾತುಗಳನ್ನು ನಾವು ಓದಬೇಕು, ಆಲಿಸಬೇಕು, ಧ್ಯಾನಿಸಬೇಕು. ಮಗುವಿಗೆ ಎಲ್ಲವೂ ಕುತೂಹಲವಾಗಿ, ಕಣ್ಣಿಗೆ ಪ್ರಶ್ನೆಗಳಾಗಿ, ಉತ್ತರಗಳಾಗಿ ಕೊನೆಗೆ ಬದುಕಿನ ಕಲಿಕೆಯಾಗುವಂತೆ, ಕ್ರಿಸ್ತನ ಮಾತುಗಳು ನಮಗೆ ಕುತೂಹಲಕಾರಿಯಾಗಿ, ಪ್ರಶ್ನೆಗಳಾಗಿ, ಉತ್ತರಗಳಾಗಿ ಕೊನೆಗೆ ನಮ್ಮ ಪ್ರಜ್ಞೆಯಾಗಬೇಕು. ಕ್ರಿಸ್ತನನ್ನು ನಮ್ಮ ಪ್ರಜ್ಞೆಯಾಗಿಸುವ ಪ್ರಕ್ರಿಯೆಯಲ್ಲಿ ಮೊದಲಿಗೆ ಆಗಬೇಕಾದದ್ದು ಕ್ರಿಸ್ತನ ಮಾತುಗಳ ಪರಿಚಯ. ಕ್ರಿಸ್ತನ ಮಾತುಗಳನ್ನು ಪರಿಚಯಿಸುವ ಉದ್ದೇಶದಿಂದ ಕ್ರಿಸ್ತನ ಮಾತುಗಳನ್ನು ದಿನಂಪ್ರತಿ ನಮಗೆ ನೀಡಲು ಈ ವೆಬ್‌ಸೈಟ್ ಅನ್ನು ಸಿದ್ಧಪಡಿಸಲಾಗಿದೆ. ಈ ಮೂಲಕ ದೇವರ ವಾಕ್ಯವನ್ನು ದಿನನಿತ್ಯವೂ ಪಠಿಸಿ, ಧ್ಯಾನಿಸಿ ಅನುಸರಿಸಿ ಬಾಳಲು ಈ ವೆಬ್‌ಸೈಟ್ ನಮಗೆ ಸಹಾಯವಾಗಲೆಂದು ಹಾರೈಸುತ್ತೇನೆ. ಈ ವೆಬ್‌ಸೈಟ್ ನ ಸಿದ್ಧತೆಗೆ ಶ್ರಮಿಸಿದ ಸರ್ವರನ್ನು ದೇವರು ಹರಸಿ ಆಶೀರ್ವದಿಸಲೆಂದು ಪ್ರಾರ್ಥಿಸುತ್ತೇನೆ.


ಅರ್ಪಣೆ

 

ದೂರ ತೀರದ

ಶಾಂತ ಮೂರ್ತಿಯಂತೆ

ಜನರನ್ನೆಲ್ಲ ಆಡಿಸಿ ತಾ ಮಾತ್ರ

ನೇಪಥ್ಯದಲ್ಲಿ ನಿಂತರೂ

ಮನೆ–ಮನಗಳಲ್ಲಿ ವ್ಯಾಪಿಸಿರುವ ಧರ್ಮ ದೀವಿಗೆ

ಫಾದರ್ ಐ. ಚಿನ್ನಪ್ಪ

 

ಸಮಾಜವನ್ನು/ವ್ಯಕ್ತಿಗಳನ್ನು ಶೋಧಿಸುವ ಕುತೂಹಲ ಕಣ್ಣುಗಳು,

ಆದರ್ಶ ಸಮಾಜವೊಂದನ್ನು ಕಟ್ಟುವ ಕನಸುಗಳು,

ಮಾನವೀಯತೆಯಿಂದ ಮಿಡಿಯುವ ಹೃದಯ,

ಇತಿಹಾಸ-ವರ್ತಮಾನಗಳ ಹಿನ್ನಲೆಯಲ್ಲಿ ಸತ್ಯವನ್ನು ಅನ್ವೇಷಿಸುವ ಪ್ರಜ್ಞಾವಂತಿಕೆ

ಇವೆಲ್ಲಾ ಗುಣಗಳನ್ನು ಗಾಢವಾಗಿ ರೂಢಿಸಿಕೊಂಡು ಬಾಳಿದ

ಫಾದರ್ ಫ್ರಾನ್ಸಿಸ್ ಗುಂಟಿಪಲ್ಲಿ ಎಸ್. ಜೆ

 

ಇವರ ಅನಂತ ಬದುಕಿಗೆ…..